ಹಲೋ ಸ್ನೇಹಿತರೇ, ಇತ್ತೀಚೆಗೆ ರಾಜ್ಯ ಸರ್ಕಾರ ರಾಜ್ಯದ ಗ್ರಾಮ ಪಂಚಾಯತಿಗಳ ಸಮಸ್ಯೆಗಳಿಗೆ ಪರಿಹಾರ ಪಡೆಯಲು & ಸೇವೆಗಳಿಗಾಗಿ ಪ್ರಾರಂಭಿಸಿರುವ ‘ಪಂಚಮಿತ್ರ ವ್ಯಾಟ್ಸಪ್ ಚಾಟ್’ & ‘ಪಂಚಮಿತ್ರ ಪೋರ್ಟಲ್’ ಗ್ರಾಮೀಣಾಭಿವೃದ್ಧಿಗಾಗಿ ಪರಿಚಯಿಸಿದೆ. ಇದರಿಂದ ನಮ್ಮ ಸಮಸ್ಯೆಯನ್ನು ಪರಿಹರಿಸಿಕೊಳ್ಳುವುದು ಹೇಗೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.
ಈ ವೇದಿಕೆಯ ಮೂಲಕ ಸಾರ್ವಜನಿಕರು ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದ ಬೇರೆ ಬೇರೆ ಇಲಾಖೆಗಳ ಹಲವು ಸೇವೆಗಳನ್ನು ವಾಟ್ಸಾಪ್ ಚಾಟ್ ಮೂಲಕವೇ ಪಡೆಯಬಹುದು.
ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್ ಆಯುಕ್ತಾಲಯ ಪ್ರಾರಂಭಿಸಿರುವ ‘ಪಂಚಮಿತ್ರ’ ವಾಟ್ಸಾಪ್ ಚಾಟ್‌ಗೆ ಅಭೂತಪೂರ್ವ ಸ್ಪಂದನೆ ದೊರೆತಿದ್ದು; ಕೇಲವೇ ದಿನಗಳಲ್ಲಿ ಲಕ್ಷಾಂತರ ಜನ ಬಳಕೆದಾರರಾಗಿದ್ದಾರೆ. ‘ಪಂಚಮಿತ್ರ ಪೋರ್ಟಲ್’ನಲ್ಲಿ ನಿತ್ಯ ಸಾವಿರಾರು ಕುಂದು-ಕೊರತೆ ದೂರುಗಳು ದಾಖಲಾಗುತ್ತಿವೆ.
Contents
ಕುಳಿತಲ್ಲೇ ಹಲವು ಸೇವೆಗಳು
ಇದು ಪುರಸಭೆ, ನಗರಸಭೆ ಹಾಗೂ ಮಹಾನಗರ ಪಾಲಿಕೆಯಲ್ಲೂ ಇಲ್ಲದ ವಿಶೇಷ ಸೌಲಭ್ಯ. ರಾಜ್ಯದ 5,991 ಗ್ರಾಮ ಪಂಚಾಯತಿಗಳಲ್ಲಿ ಈ ಸೇವೆ ಪ್ರಾರಂಭವಾಗಿದ್ದು; ಗ್ರಾಮ ಪಂಚಾಯಿತಿಗಳಿಗೆ ಸಂಬಂಧಿಸಿದ ಸೇವೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು, ಸಲ್ಲಿಸಿದ ಅರ್ಜಿಗಳ ಸ್ಥಿತಿಗತಿ ಪರಿಶೀಲಿಸಲು ಹಾಗೂ ಗ್ರಾಮ ಪಂಚಾಯತಿಗಳಿಗೆ ಸಂಬಂಧಿಸಿದ ಕುಂದುಕೊರತೆ ದಾಖಲಿಸಬಹುದಾಗಿದೆ.
ವಿಶೇಷವೆಂದರೆ ಗ್ರಾಮದ ಸಮಸ್ಯೆ ಕುರಿತು ನೇರಾನೇರ ದೂರು ದಾಖಲಿಸಲಾಗದಷ್ಟು ಹಳ್ಳಿ ರಾಜಕೀಯ ಕಲುಷಿತಗೊಂಡಿದೆ. ಪಂಚಾಯತಿ ಸಮಸ್ಯೆಗಳ ಕುರಿತು ನೀಡಿದ ದೂರುಗಳು ಹಲವು ಸಂದರ್ಭಗಳಲ್ಲಿ ವೈಯಕ್ತಿಕ ದ್ವೇಷ ಸಾಧನೆಗೆ ಕಾರಣವಾಗುತ್ತವೆ. ಆದರೆ ‘ಪಂಚಮಿತ್ರ ವಾಟ್ಸಾಪ್ ಚಾಟ್’ ಮೂಲಕ ದೂರು ನೀಡಿದರೆ ದೂರುದಾರರ ಗೌಪ್ಯತೆಯನ್ನೂ ಕಾಪಾಡಲಾಗುತ್ತದೆ. ಹಾಗಾಗಿ ಜನರು ನಿರ್ಭಯವಾಗಿ ದೂರು ನೀಡಬಹುದಾಗಿದೆ.
ಯಾವೆಲ್ಲ ಸೇವೆಗಳು ಸಿಗುತ್ತವೆ?
ಗ್ರಾಮ ಪಂಚಾಯಿತಿಗೆ ಸಂಬಂಧಿಸಿದಂತೆ 17 ಸೇವೆಗಳು ಮತ್ತು ಸರ್ಕಾರದ ಇತರೆ ಇಲಾಖೆ ಸಂಬಂಧಿಸಿದ 72 ಸೇವೆಗಳು ಸೇರಿ ಒಟ್ಟು 89 ಸರ್ಕಾರಿ ಸೇವೆಗಳು ಪಂಚಮಿತ್ರ ಪೋರ್ಟಲ್ ಮತ್ತು ಪಂಚಮಿತ್ರ ವಾಟ್ಸಪ್ ಚಾಟ್ ಮುಖಾಂತರ ಸಾರ್ವಜನಿಕರಿಗೆ ಲಭ್ಯವಿರಲಿವೆ. ಪ್ರಮುಖ ಸೇವೆಗಳ ವಿವರ ಕೆಳಗಿನಂತಿದೆ:
- ಕಟ್ಟಡ ನಿರ್ಮಾಣ ಪರವಾನಗಿ.
- ಹೊಸ ನೀರು ಪೂರೈಕೆ ಸಂಪರ್ಕ.
- ನೀರು ಸರಬರಾಜಿನ ಸಂಪರ್ಕ ಕಡಿತ.
- ಕುಡಿಯುವ ನೀರಿನ ನಿರ್ವಹಣೆ.
- ಬೀದಿ ದೀಪದ ನಿರ್ವಹಣೆ.
- ಗ್ರಾಮ ನೈರ್ಮಲ್ಯ ನಿರ್ವಹಣೆ.
- ಉದ್ದಿಮೆ ಪರವಾನಗಿ.
- ಸ್ವಾಧೀನ ಪ್ರಮಾಣ ಪತ್ರ.
- ನಾನಾ ಸೇವೆ ಸಂಬಂಧ ರಸ್ತೆ ಅಗೆತಕ್ಕೆ ಅನುಮತಿ.
- ಕೈಗಾರಿಕೆ, ಕೃಷಿ ಆಧಾರಿತ ಉತ್ಪಾದನಾ ಘಟಕ ಸ್ಥಾಪನೆಗಳಿಗೆ ಅನುಮತಿ.
- ನಿರಾಕ್ಷೇಪಣಾ ಪತ್ರ.
- ನರೇಗಾ ಯೋಜನೆಯಡಿ ಜಾಬ್ ಕಾರ್ಡ್ ವಿತರಣೆ.
- ಕಾರ್ಮಿಕರಿಗೆ ಉದ್ಯೋಗ ಕಲ್ಪಿಸುವುದು.
- ಹೊಸ ಇಲ್ಲವೇ ಅಸ್ತಿತ್ವದಲ್ಲಿರುವ ದೂರಸಂಪರ್ಕ ಮೂಲಸೌಕರ್ಯ ಗೋಪುರಕ್ಕೆ ಅನುಮತಿ.
- ಓವರ್ ಗ್ರೇಂಡ್ ಕೇಬಲ್ ಮೂಲಸೌಕರ್ಯ / ನೆಲದಾಳದ ಕೇಬಲ್ ಮೂಲಸೌಕರ್ಯಕ್ಕಾಗಿ ಅನುಮತಿ.
- ಜತೆಗೆ ನಮೂನೆ 9/11ಎ, ನಮೂನೆ 11ಬಿ.
ಗ್ರಾಮ ಪಂಚಾಯತಿ ಸಮಸ್ಯೆಗಳಿಗೆ ಪರಿಹಾರ
ವಾಟ್ಸಾಪ್ ಮೂಲಕ ಗ್ರಾಮ ಪಂಚಾಯತಿಗಳಿಗೆ ಸಂಬಂಧಿಸಿದಂತೆ ಕುಡಿಯುವ ನೀರು, ರಸ್ತೆ & ಸೇತುವೆಗಳ ದುರಸ್ತಿ, ಉದ್ಯೋಗ ಖಾತ್ರಿ ಯೋಜನೆಗೆ & ಪಂಚಾಯತ್ ರಾಜ್ ವಿಷಯಗಳಿಗೆ ಸಂಬಂಧಿತ ಕುಂದುಕೊರತೆ ದಾಖಲಿಸಿ ಪರಿಹಾರ ಕಂಡುಕೊಳ್ಳಬಹುದಾಗಿದೆ. ಕುಂದು-ಕೊರತೆಯ ಸ್ಥಿತಿ-ಗತಿಯನ್ನು ಕಾಲಕಾಲಕ್ಕೆ ಪರಿಶೀಲಿಸಲೂ ಅವಕಾಶ ಮಾಡಿಕೊಡಲಾಗಿದೆ.
ಇವುಗಳ ಜೊತೆಗೆ ಚುನಾಯಿತ ಪ್ರತಿನಿಧಿಗಳ ವಿವರ, ಸಿಬ್ಬಂದಿ ಮಾಹಿತಿ, ಪೂರ್ಣಗೊಂಡ ಗ್ರಾಪಂ ಸಭೆ, ಗ್ರಾಪಂ ಮುಂಬರುವ ಸಭೆಗಳ ಮಾಹಿತಿ, ಆದಾಯ ಸಂಗ್ರಹದ ವಿವರ, ಸೇವೆಗಳ ವಿವರಗಳು, ಸ್ವ ಸಹಾಯ ಗುಂಪಿನ ವಿವರಗಳು ಸೇರಿದಂತೆ ಹಲವು ಮಾಹಿತಿಯನ್ನು ಕೂಡ ಪಡೆಯಬಹುದು.
ವಾಟ್ಸಪ್ ಚಾಟ್‌ನಲ್ಲಿ ಸೇವೆ ಪಡೆಯುವುದು ಹೇಗೆ?
ಹಂತ 1: ಗ್ರಾಮ ಪಂಚಾಯತಿಯ ಸೇವೆಯನ್ನು ಪಡೆಯಲು ಪಂಚಮಿತ್ರ ವಾಟ್ಸಾಪ್ ನಂಬರ್ 82775 06000ಗೆ ಮೊದಲು ‘ಹಾಯ್’ ಎಂಬ ಸಂದೇಶ ಕಳಿಸಬೇಕು.
ಹಂತ 2: ನಂತರದಲ್ಲಿ ನಿಮಗೆ ಭಾಷೆಗಳ ಪಟ್ಟಿಯನ್ನು ತೋರಿಸಲಾಗುತ್ತದೆ. ಕನ್ನಡ & ಇಂಗ್ಲಿಷ್ ಭಾಷೆ ಆಯ್ಕೆಗಳ ಪೈಕಿ ಕನ್ನಡ ಆಯ್ಕೆ ಮಾಡಿಕೊಂಡು ನಿಮ್ಮ ಜಿಲ್ಲೆ, ತಾಲ್ಲೂಕು, ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು.
ಹಂತ 3: ಕೊನೆಯದಾಗಿ ನಿಮ್ಮ ಗ್ರಾಮ ಪಂಚಾಯಿತಿಯನ್ನು ಆಯ್ಕೆ ಮಾಡಿ ನಿಮಗೆ ಬೇಕಾಗಿರುವ ಸೇವೆಗಳ ಮಾಹಿತಿ / ಕುಂದು ಕೊರತೆಯನ್ನು ಆಯ್ಕೆ ಮಾಡಿಕೊಂಡು ಮೂಲಕ ಅವುಗಳ ಲಾಭ ಪಡೆಯಬಹುದಾಗಿದೆ.
ಇತರೆ ವಿಷಯಗಳು
ರಾಜ್ಯದಲ್ಲಿ ಸೈಕ್ಲೋನ್ ಭೀತಿ, 6 ಜಿಲ್ಲೆಗಳಿಗೆ ಮತ್ತೆ ರೆಡ್ ಅಲರ್ಟ್
ಅಂಚೆ ಇಲಾಖೆಯಲ್ಲಿ 44200 ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ..! 10th ಪಾಸ್ ಆಗಿದ್ರೆ ಸಾಕು